ಮ್ಯಾಲರಿ, ತಾಮಸ್
1400-1471. ಇಂಗ್ಲಿಷ್ ಬರಹಗಾರ ಹಾಗೂ ಭಾಷಾಂತರಕಾರ. ಹುಟ್ಟಿದ್ದು ವಾರ್‍ವಿಕ್‍ಷೈರ್‍ನ ಮ್ಯೂಬೋಲ್ಡ್ ರೆವೆಲ್‍ನಲ್ಲಿ. ಪಾರ್ಲಿಮೆಂಟಿನ ಸದಸ್ಯ. ಲಂಕಾಸ್ಟರ್ ಪಂಗಡಕ್ಕೆ ಸೇರಿ ಕಷ್ಟಗಳಿಗೆ ಗುರಿಯಾದ. ಹಲವು ವರ್ಷಗಳನ್ನು ಸೆರೆಮನೆಯಲ್ಲಿ ಕಳೆದ. `ಮಾರ್ಟ್ ಡಿ ಅರ್ಥರ್` ನ ಭಾಷಾಂತರ 1469ರಲ್ಲಿ ಸಂಪೂರ್ಣಗೊಂಡು 1485ರಲ್ಲಿ ಕ್ಯಾಕ್ಸ್‍ಟನ್ ವತಿಯಿಂದ ಪ್ರಕಟವಾಯಿತು. ತಾನು ಒಂದು ಫ್ರೆಂಚ್ ಕೃತಿಯನ್ನು ಭಾಷಾಂತರ ಮಾಡಿರುವುದಾಗಿ ಈತ ಹೇಳಿಕೊಂಡರೂ ವಾಸ್ತವವಾಗಿ ಅದು ಹಲವು ಮೂಲಗಳಿಂದ ಸಾಹಸದ ಕತೆಗಳನ್ನು ಒಟ್ಟುಗೂಡಿಸಿರುವ ಸಂಕಲನದಂತೆ ಕಾಣುತ್ತದೆ. ಆದರೂ ಭಾಷಾಂತರ ಐಕ್ಯವಿರುವ ಸಾಹಿತ್ಯಕೃತಿ. ಇದು ಮುಖ್ಯವಾಗಿ ಅರಸ ಅರ್ಥರನ ಕತೆ. ಈ ಸಾಮಗ್ರಿಯ ಕೇಂದ್ರ, `ದ ಹೋಲಿ ಗ್ರೆಯ್ಲ್ ಎಂಬ ಪವಿತ್ರ ಬಟ್ಟಲಿನ ಅನ್ವೇಷಣೆ. ಇವನು ಬಳಸಿಕೊಂಡ ಹಲವು ಕಥೆಗಳು, `ಷೇಗನ್ ಎಂದರೆ ಕ್ರಿಶ್ಚಿಯನ್ನರದಲ್ಲದ ಮೂಲದವು. ಇವನು ಆ ಕಥೆಗಳಲ್ಲಿಯೂ ಕ್ರೈಸ್ತಮತದ ಮನೋಧರ್ಮವನ್ನು ತುಂಬಿದ. ಅವನ ವೈಭವದ ಆಳ್ವಿಕೆ, ಸಾಧನೆಗಳು, ಪತ್ಮಿ ಗನಿವರಳ ಮತ್ತು ಗೆಳೆಯ ಲಾನ್ಸಿಲಾಟ್‍ನ ದ್ರೋಹ, ಅವಿಷಾದ ಮುಸುಕಿದ ಅರ್ಥರನ ಜೀವನದ ಅಂತ್ಯ ಮುಂತಾದವು ಇಲ್ಲಿ ನಿರೂಪಿತವಾಗಿವೆ. ಒಂದು ದೃಷ್ಟಿಯಿಂದ ಇದು ವಾಸ್ತವಿಕತೆಯಿಂದ ದೂರವಾದ ಕೃತಿ. ತನ್ನದೇ ಆದ ಜಗತ್ತೊಂದಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆದರ್ಶಪ್ರೇಮಿಗಳು, ದೀನ ದಲಿತರ ಸೇವೆಯಲ್ಲಿ ಬೇಸರವರಿಯದ ವೀರರು, ಅದ್ಭುತ ಘಟನೆಗಳು-ಇವುಗಳ ಜಗತ್ತು ಇದು. ಆದರೆ ಇಲ್ಲಿ ಧ್ವನಿಯ ವಾಸ್ತವಿಕತೆಯಿಲ್ಲದಿಲ್ಲ. ವಾರ್ ಆಫ್ ರೋಸಸ್‍ನ ಕಹಿಯುಂಡ ಜೀವದ ಸೃಷ್ಟಿ ಇದು. ನೀತಿಯ ಉದ್ದೇಶ ಇದರಿಂದಲೇ ಅ್ಯಸ್ಕಮ್‍ನಂಥವರು ಇದು ಅಪಾಯಕರ ಕೃತಿ ಎಂದು ವಿರೋಧಿಸಿದುದು. ಶೈಲಿ ಸರಳವಾದುದು, ತಕ್ಕಷ್ಟು ವೈವಿಧ್ಯವಿಲ್ಲ. ಆದರೆ ಸ್ಪಷ್ಟವೂ ಲಲಿತವೂ ಆದ ಶೈಲಿ. ಸ್ಪೆನ್ಸರ್ ತನ್ನ ಮಹಾರಾಷ್ಟ್ರಕ್ಕೆ ಸಾಮಗ್ರಿಯನ್ನು ಇವನ ಕೃತಿಯ ಗಣಿಯಿಂದ ತೆಗೆದುಕೊಂಡ. ಟೆನಿಸನ್ ಸಹ ಇದರ ಕೆಲವು ಭಾಗಗಳನ್ನು ಹಾಗೆಯೇ ಬಳಸಿಕೊಂಡಿದ್ದಾನೆ. ಕ್ಯಾಕ್ಸ್‍ಟನ್ ಪ್ರಕಟಿಸಿದ ಈ ಕೃತಿ ಮುಂದಿನ ಸಾಹಿತ್ಯದ ಮೇಲೆ ಅಸಾಧಾರಣ ಪ್ರಭಾವ ಬೀರಿತು. ಇದು ಕತೆಗಳ ಗಣಿ. ಶತಮಾನಗಳ ಕಾಲ ಇಂಗ್ಲಿಷ್ ಕವಿಗಳ ಸ್ಮøತಿಯಲ್ಲಿ ಉಳಿದ ಕೃತಿ.

	ಮ್ಯಾಲರಿ ಇಂಗ್ಲಿಷ್ ಸಾಹಿತ್ಯಕ್ಕೆ ಒಂದು ಗದ್ಯಮಹಾಕಾವ್ಯವನ್ನು ನೀಡಿದ.		
	

  (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ